Tuesday, 3 May 2011

ಆಧುನಿಕ ಮಾಂತ್ರಿಕರು- ಒಂದು ವರದಿ


ಮಣ್ಣಿನ ವಾಸನೆ, ಬೂಸಾ ವಾಸನೆ, ರಕ್ತದ ವಾಸನೆ ಎಲ್ಲವನ್ನೂ ಕನ್ನಡ ಸಾಹಿತ್ಯ ಅನುಭವಿಸಿದೆ. ದಮನಿತರ ಪಾದಗಳ ಅಡಿಯಿಂದ ಎದ್ದ ಧೂಳಿನ ವಾಸನೆಯೂ ಇಲ್ಲಿದೆ. ಬ್ರಾಂದಿ, ರಮ್ ವಾಸನೆಯಂತೂ ಬೀಚಿ, ಅನಕೃ ಕಾಲದಿಂದಲೇ ಇದೆ. ಇನ್ನು ಮಸಾಲೆ ದೋಸೆ ವಾಸನೆ ಕೂಡ ಮಾಸ್ತಿಯವರ ಗಾಂಬಜಾರಿನ ವಿದ್ಯಾರ್ಥಿಭವನದಿಂದ ನಾವು ಸೇವಿಸಿದ್ದೇವೆ. ಲಾಂಗು ಮಚ್ಚುಗಳಿಗೆ ಅಂಟಿಕೊಂಡ ರಕ್ತದ ವಾಸನೆಯಂತೂ ರವಿ ಬೆಳಗೆರೆ, ಅಗ್ನಿ ಶ್ರೀಧರ್‌ರ ಕೃತಿಗಳ ಮೂಲಕ ಪರಿಚಿತ.

ಮೊನ್ನೆ ಹೊಸದೊಂದು ವಾಸನೆಯ ಪರಿಚಯವಾಯ್ತು. ಅದು ಶಿವಾಜಿನಗರದ ಸ್ಮಶಾನದ ಬೂದಿ ವಾಸನೆ ಹಾಗೂ ಶಿವಾಜಿನಗರದ ಪುಡಿ ರೌಡಿಗಳ ಬೆವರಿನ ವಾಸನೆ. ಇದು ಅಗ್ನಿ ಶ್ರೀಧರ್‌ರ ಹೊಸ ಕೃತಿ ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಬಿಡುಗಡೆ ವೇಳೆ ಕಂಡುಬಂದದ್ದು.

ಏಪ್ರಿಲ್ ೨೮ರಂದು ಸಂಜೆ ಬೇರೇನೂ ಕೆಲಸ ಇಲ್ಲವೆಂದು ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ಗೆ ಹೋಗಿದ್ದೆ. ಶ್ರೀಧರ್ ಪುಸ್ತಕ ಬಿಡುಗಡೆ, ಅಂಕಿತ ಪ್ರಕಾಶನ ಪ್ರಕಟಣೆ. ಈ ಅಂಕಿತದ ಪ್ರಕಾಶ್, ಜನಪ್ರಿಯ ಲೇಖಕರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಾರೆ ಎಂಬ ಆರೋಪಗಳಿವೆ. ಇರಲಿ.

ಹೋಗಿ ನೋಡುತ್ತೇನೆ, ಎಂಜಿ ರೋಡಿನಲ್ಲಿ ಟ್ರಾಫಿಕ್ ಜಾಮ್ ಆದಂತೆ ಹಾಲ್‌ನ ಒಳಗೆ ಹೋಗುವ ಬಾಗಿಲು ಇಡಿಕಿರಿದುಬಿಟ್ಟಿದೆ. ತುಂಬಿದ ಹಾಲ್. ಬಸವನಗುಡಿಯ ಮಾಮೂಲಿ ಪ್ರೇಕ್ಷಕರು ಯಾರೂ ಕಾಣಿಸಲಿಲ್ಲ. ಹೆಚ್ಚಿನವರು ನೇರ ಶಿವಾಜಿನಗರದ ಮಾಂಸದ ಮಾರ್ಕೆಟ್‌ಗಳಿಂದ ಈಗ ತಾನೆ ಎದ್ದು ಬಂದವರಂತೆ ಇದ್ದರು. ಇರಲಿ, ಸಾಹಿತ್ಯವು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿರಬೇಕು ತಾನೆ !

ಮಾತು ಮಾತಿಗೂ ಚಪ್ಪಾಳೆ. ‘ಅಗ್ನಿ ಶ್ರೀಧರ್ ಮಹಾ ದಾರ್ಶನಿಕ ಲೇಖಕ’ ಅಂದರು ಮೊಗಳ್ಳಿ ಗಣೇಶ್. ಅವರ ದರ್ಶನ ಏನು ಎಂದು ನಮ್ಮಂಥ ಪಾಮರರಿಗೆ ಅರ್ಥ ಮಾಡಿಸಲು ಅವರಿಂದ ಸಾಧ್ಯವಾಗಲಿಲ್ಲ. ‘ಪಾಪಿಗಳ ಲೋಕ ಎಂಬುದೇನೂ ಬೇರೆ ಇಲ್ಲ. ಅವರೆಲ್ಲ ನಮ್ಮ ನಡುವೇ ಇರುತ್ತಾರೆ’ ಅಂದ್ರು ಬಂಜಗೆರೆ ಜಯಪ್ರಕಾಶ್. ನಿಜ, ಪಾಪಿಗಳು ಸಭೆಯ ನಡುವೆಯೂ ಇದ್ದರು, ವೇದಿಕೆಯ ಮೇಲೂ ಇದ್ದರು. ಶ್ರೀಧರ್ ಮಾತನಾಡಿದ ಬಳಿಕ ಎಲ್ಲ ಎದ್ದು ಹೊರಟೇಬಿಟ್ಟರು. ಅಧ್ಯಕ್ಷರಾಗಿದ್ದ ಚಂಪಾ ‘ನನ್ನ ಮಾತೂ ಸ್ವಲ್ಪು ಕೇಳೇ ಹೋಗ್ರೆಲಾ...’ ಎಂದು ಅಲವತ್ತುಕೋಬೇಕಾಯಿತು.

ಇರಲಿ, ಸಾಹಿತ್ಯ ಅಂದ ಮೇಲೆ ಎಲ್ಲವೂ ಇರಬೇಕು, ರೌಡಿಸಂ ಕೂಡ. ಬಸವನಗುಡಿಯ ಸಾಫ್ಟ್ ಜನ, ಸಾಹಿತಿಗಳ ರೌಡಿಸಂ ಮಾತ್ರ ಗೊತ್ತಿದ್ದವರು, ರೌಡಿಗಳ ಸಾಹಿತ್ಯವನ್ನೂ ಅರ್ಥ ಮಾಡಿಕೊಳ್ಳಲಿ ಬಿಡಿ, ತಪ್ಪೇನು ?

Wednesday, 27 April 2011

ಮಾರ್ಕ್‌ಗೊಂದಿಷ್ಟು ಮಾರ್ಕು


ಮಾರ್ಕ್ ಟ್ವೇನ್‌ನನ್ನು ಯಾವತ್ತಾದರೂ ಓದಿದ್ದೀರ ? ಎಂಥ ಮಜಾ ಕೊಡ್ತಾನೆ ಅಂತ ಹೇಳುವಂತಿಲ್ಲ. ಸಕ್ಕತ್ ಫಿಟ್ಟಿಂಗ್ ಮಾಸ್ಟರ್. ಪ್ರತಿ ವಾಕ್ಯದಲ್ಲೂ ಒಂದು ಟ್ವಿಸ್ಟ್ ಇಟ್ಟಿರುತ್ತಾನೆ. ಹೆಚ್ಚಿನವು ಪಕ್ಕನೆ ಅರ್ಥವಾಗಿ ಗೊಳ್ಳನೆ ನಗೆ ತರಿಸುತ್ತವೆ. ಇನ್ನು ಕೆಲವು ಹಾಗಲ್ಲ, ಓದುತ್ತ ಓದುತ್ತ ಮುಂದೆ ಹೋದಾಗ ಹಿಂದಿನದ್ಯಾವುದೋ ಥಟ್ಟನೆ ಅರ್ಥವಾಗಿ ನಗು ಉಬ್ಬರಿಸಿಬಿಡುತ್ತದೆ. ಇವನು ಯಾರು ಏನು ಎಲ್ಲಿಯ ಸಾಹಿತಿ ಅಂತೆಲ್ಲ ಕೊರೆದು ನಿಮ್ಮ ತಲೆ ತಿನ್ನಬೇಕಾಗಿಲ್ಲ. ಅದೆಲ್ಲ ಗೂಗಲಿಸಿದರೆ ನಿಮಗೇ ಸಿಗುತ್ತೆ. ಅವನ ಒಂದಷ್ಟು ‘ಬೆಳ್ಳುಳ್ಳಿ ಪಟಾಕಿ’ಗಳನ್ನು ಇಲ್ಲಿ ಅನುವಾದಿಸಿ ಕೊಡುತ್ತೇನೆ. ಓದಿ ಮಜಾ ಉಡಾಯಿಸಿ.

***

೧. ಆರೋಗ್ಯ ಲೇಖನಗಳನ್ನು ಓದುವವರು ಹುಷಾರಾಗಿರಿ. ಒಂದು ದಿನ ಮುದ್ರಣ ದೋಷ ನಿಮ್ಮನ್ನು ಸಾಯಿಸಬಹುದು.

೨. ನಿನ್ನ ಪುಸ್ತಕ ಕೈಗೆತ್ತಿಕೊಂಡ ಬಳಿಕ ನಕ್ಕೂ ನಕ್ಕೂ ಸುಸ್ತಾಗಿಬಿಟ್ಟೆ. ಇನ್ಯಾವತ್ತಾದರೂ ಓದಬೇಕು.

೩. ಪ್ಯಾರಿಸ್‌ಗೆ ಹೋಗಿ ನಾನು ಫ್ರೆಂಚ್ ಮಾತನಾಡಿದಾಗ ಅಲ್ಲಿನ ಜನ ಪಿಳಿಪಿಳಿ ಕಣ್ಣುಬಿಟ್ಟು ನೋಡಿದರು. ಆ ಮೂರ್ಖರಿಗೆ ಅವರದೇ ಭಾಷೆಯನ್ನು ಅರ್ಥ ಮಾಡಿಸಲು ಕಡೆಗೂ ನನಗೆ ಸಾಧ್ಯವಾಗಲಿಲ್ಲ.

೪. ಬಾಯಿ ಮುಚ್ಚಿಕೊಂಡಿರುವುದು ಒಳ್ಳೆಯದು. ಇಲ್ಲವಾದರೆ ನೀವು ಮೂರ್ಖನೋ ಅಲ್ಲವೋ ಎಂಬ ಜನರ ಡೌಟ್ ಕ್ಲಿಯರ್ ಆಗಿಬಿಡುತ್ತದೆ.

೫. ಅಮೆರಿಕವನ್ನು ಕಂಡುಹಿಡಿದದ್ದು ಅದ್ಭುತ. ಕಂಡು ಹಿಡಿಯದಿದ್ದರೆ ಇನ್ನೂ ಸೊಗಸಾಗಿತ್ತು.

೬. ಪ್ರಯತ್ನಪಟ್ಟರೆ ನಾವು ದೋಷಗಳ ಬಗ್ಗೆ ಪ್ರಾಮಾಣಿಕವಾಗಿರಬಹುದು- ಇನ್ನೊಬ್ಬನ.

೭. ನಿಮಗೇನು ಮಾಡಲು ಇಷ್ಟವಿಲ್ಲವೋ ಅದನ್ನು ದಿನಕ್ಕಿಷ್ಟು ಹೊತ್ತಾದರೂ ಮಾಡಿ; ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಬೇರೆ ಉಪಾಯವಿಲ್ಲ.

೮. ಶಿಕ್ಷಣ- ಬುದ್ಧಿವಂತರಿಗೆ ತೆರೆದಿಡುತ್ತದೆ, ಮೂರ್ಖರಿಗೆ ಮುಚ್ಚಿಡುತ್ತದೆ. ಉಳಿದವರಿಗೆ ಅವರ ಜ್ಞಾನದ ಮಿತಿಯನ್ನು ತೋರಿಸುತ್ತದೆ.

೯. ಸರಿಯಾದ ಅಂಕಿ ಸಂಖ್ಯೆಗಳನ್ನು ಮೊದಲು ಸಂಪಾದಿಸಿಕೊಳ್ಳಿ. ಅವುಗಳನ್ನು ನಿಮಗೆ ಬೇಕಾದಂತೆ ಜೋಡಿಸುವ ಕೆಲಸ ಆಮೇಲೆ ಮಾಡಬಹುದು.

೧೦. ಶವಸಂಸ್ಕಾರಕ್ಕೆ ನಾನು ಯಾವತ್ತೂ ಹೋಗುವುದಿಲ್ಲ. ಆದರೆ ಅದರ ಬಗ್ಗೆ ನನಗೆ ಒಪ್ಪಿಗೆಯಿದೆ.

೧೧. ನನ್ನ ಬದುಕಿನಲ್ಲಿ ಹಲವಾರು ಭಯಂಕರ ಸಂಗತಿಗಳಿದ್ದವು. ಅವುಗಳಲ್ಲಿ ಕೆಲವು ನಿಜವಾಗಲೂ ನಡೆದದ್ದು.

೧೨. ಬಚಾವು, ನನ್ನ ಶಿಕ್ಷಣದಲ್ಲಿ ಶಾಲೆ ತಲೆ ತೂರಿಸದಂತೆ ನಾನು ನೋಡಿಕೊಂಡಿದ್ದೆ.

೧೩. ಹಸಿದು ಸಾಯುತ್ತಿರುವ ನಾಯಿಯನ್ನು ಕೊಂಡೊಯ್ದು ಉಪಚರಿಸಿ ಅನ್ನವಿಕ್ಕಿದರೆ, ಅದು ನಿಮ್ಮನ್ನೆಂದೂ ಕಚ್ಚುವುದಿಲ್ಲ. ನಾಯಿ ಹಾಗೂ ಮನುಷ್ಯನಿಗಿರುವ ಅಂತರವಿದು.

೧೪. ನೀವು ಸತ್ಯವನ್ನೇ ಹೇಳಿದರೆ, ಇನ್ನೇನನ್ನೂ ನೆನಪಿಟ್ಟುಕೊಳ್ಳುವ ಪ್ರಮೇಯವಿಲ್ಲ.

೧೫. ದುಃಖದ ಹಾದಿಯನ್ನು ಅದೇ ನೋಡಿಕೊಳ್ಳುತ್ತದೆ. ಆದರೆ ಸಂತೋಷದ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿತವಾಗಬೇಕಾದರೆ ಇನ್ನೊಬ್ಬರು ಜತೆಗೆ ಬೇಕೇ ಬೇಕು.

೧೬. ಪ್ರಾಮಾಣಿಕತೆ ಅತ್ಯುತ್ತಮ ಮೌಲ್ಯ- ಅದರಿಂದ ಲಾಭ ಬರುವ ಹಾಗಿದ್ದಾಗ.

೧೭. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಅದು ನಿಮ್ಮ ಮೇಲಿನವರು ನಿಮ್ಮ ಬಗ್ಗೆ ಚಾಡಿ ಹೇಳುವುದನ್ನು ತಪ್ಪಿಸುತ್ತದೆ. ಮತ್ತು ಇನ್ನಷ್ಟು ತಪ್ಪು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

೧೮. ಬ್ರಿಟಿಷನೊಬ್ಬ ಯಾಕೆ ಕೆಲಸ ಮಾಡ್ತಾನೆ ಅಂದ್ರೆ, ಅವನು ಮೊದಲೂ ಅದನ್ನೇ ಮಾಡಿರುತ್ತಾನೆ. ಅಮೆರಿಕನ್ ಯಾಕೆ ಕೆಲಸ ಮಾಡ್ತಾನೆ ಅಂದ್ರೆ ಅವನು ಯಾವತ್ತೂ ಅದನ್ನು ಮಾಡಿರೊಲ್ಲ.

೧೯. ನಮ್ಮಲ್ಲಿರೋ ನೈಸರ್ಗಿಕ ಖಳನಾಯಕ ಪ್ರವೃತ್ತಿ ಒಂದು ಬಿಟ್ಟರೆ, ಉಳಿದಂತೆ ನಾವೆಲ್ಲರೂ ಸಾಕಷ್ಟು ಪ್ರಾಮಾಣಿಕರೇ.

<!--[if gte mso 9]> Normal 0 false false false EN-US X-NONE X-NONE MicrosoftInternetExplorer4

ಬಡವರ ಬಗ್ಗೆ ಬರೆಯುವವರು ಯಾರು ?


ನನ್ನ ಪ್ರೀತಿಯ ಪತ್ರಕರ್ತ, ಲೇಖಕ ಪಾಲಗುಮ್ಮಿ ಸಾಯಿನಾಥ್ ಬರೆದ ಲೇಖನದಿಂದ ಅನುವಾದಿಸಿದ ಆಯ್ದ ಭಾಗ ಇದು. ನಿಮಗೆ ಇಷ್ಟವಾಗುತ್ತದೆ ಎಂಬ ಆಶಯದೊಂದಿಗೆ.

ಬಡತನದ ಬಗ್ಗೆ ವರದಿ ಬರೆಯಲು ಕೆಲವು ಸುಲಭ ವಿಧಾನಗಳಿವೆ. ಒಂದು- ಸಂತನ ಹಾಗೆ ಬರೆಯುವುದು. ಆಕಾಶದಲ್ಲೆಲ್ಲೋ ದೃಷ್ಟಿ ನೆಟ್ಟಂತೆ ಕಾಣುವ ಒಬ್ಬಅವಧೂತ
, ದಾರ್ಶನಿಕ ಈ ಊರಿನಲ್ಲಿ ಕಾಣಬರುವ ಎಲ್ಲ ಸಮಸ್ಯೆಗಳನ್ನು ತುಂಬ ಸುಲಭವಾಗಿ ಪರಿಹರಿಸುತ್ತಾನೆ. ಇದನ್ನೇ ದೇಶದ ಎಲ್ಲಾ ಹಳ್ಳಿಗಳಿಗೂ ವಿಸ್ತರಿಸಿದರೆ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಿ ರಾಮರಾಜ್ಯವಾಗುತ್ತದೆ ಎಂದು ವರದಿ ಮಾಡುವುದು.

ಇನ್ನೊಂದು ವಿಧಾನ- ಬಡವರು ಸದಾ ಬಲಿಪಶುಗಳು, ಅಸಹಾಯಕರು, ಹತಾಶರು ಎಂದು ಬರೆಯುವುದು. ಮತ್ತೊಂದು- ಹಳ್ಳಿಗರು ಏನೊಂದೂ ಮೋಸವನ್ನೂ ಅರಿಯದ ಅಮಾಯಕರು ಎಂದು ತಿಳಿದು ವರದಿ ಮಾಡುವುದು. ಬಡತನದ ಬಗ್ಗೆ ಇದ್ದುದನ್ನು ಇದ್ದಂತೆ, ಅಂದರೆ ಸಾಪೇಕ್ಷವಾಗಿ ನೋಡುವ ಬದಲು ಅದನ್ನು ಅಸಮಾನತೆಯ ದೃಷ್ಟಿಯಿಂದ, ವರ್ಗಶೋಷಣೆಯ ದೃಷ್ಟಿಯಿಂದ ನೋಡುವುದು ಒಂದು ಸಮಸ್ಯೆ. ಒಂದು ಕಡೆ ಬಡವರು ಕಂಡರೆ "ಇಡೀ ಜಿಲ್ಲೆಯೇ ಬಡವರಿಂದ ಭಯಂಕರವಾಗಿ ತುಂಬಿಹೋಗಿದೆ’ ಎಂದು ಬರೆಯುವವರಿದ್ದಾರೆ !

ಇತ್ತೀಚೆಗೆ ನಾನು "ಬುಂದೇಲ್‌ಖಂಡ: ಭವಿಷ್ಯವಿಲ್ಲದ ನೆಲ’ ಎಂಬ ವರದಿ ಓದಿದೆ. ವರದಿಯಲ್ಲಿ ಹೇಳಿದಂತೆ, ಎಲ್ಲರೂ ಬಡತನದಲ್ಲಿದ್ದಾರೆ. ಅಲ್ಲಿನ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ತಿಕಮ್‌ಗಢ ಒಂದು. ವರದಿಯಲ್ಲಿ ಹೇಳುವಂತೆ ಇಲ್ಲಿಯ ನೆಲ ಬರಡು. ಫಲವತ್ತಾಗಿಲ್ಲದಿರುವುದರಿಂದ ಇಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ಈ ಜಿಲ್ಲೆ ಇಡೀ ರಾಜ್ಯದಲ್ಲೇ ಗೋಧಿ ಬೆಳೆ ಬೆಳೆಯುವುದರಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಬೆಳೆಯುವವರು ಯಾರು ? ಕೆಲವೇ ಜನರಲ್ಲಿ ಈ ಶ್ರೀಮಂತಿಕೆ ಇದೆ ಎಂಬುದನ್ನು, ಹಾಗೆಯೇ ಬಡವರ ಸ್ಥಿತಿಯಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಬುದನ್ನು ವರದಿಗಾರ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದ ವರದಿ ನಿರರ್ಥಕವಾಗಿದೆ.

ಇಲ್ಲಿನ ಪ್ರತಿ ಪಾಳೆಗಾರನೂ ಸ್ವಂತ ಕೋಟೆ, ಅರಮನೆ ಹೊಂದಿದ್ದಾನೆ. ಇಲ್ಲಿನ ಅಸಂಖ್ಯಾತ ಮಂದಿ ಬಡವರಿಗೂ ಭೂಮಿಯ ಫಲವತ್ತತೆಗೂ ಸಂಬಂಧವಿಲ್ಲ. ಗೋಧಿ ಬೆಳೆಯುವುದರಲ್ಲಿ ನಂಬರ್ ಒನ್ ಆಗಿದ್ದರೂ ಸರಕಾರಿ ದಾಖಲೆಗಳ ಪ್ರಕಾರ ಇಲ್ಲಿನ ಶಿಶುಮರಣ ಪ್ರಮಾಣ ಸಾವಿರಕ್ಕೆ ೧೯೫. ಹಾಗೆ ನೋಡಿದರೆ ಇದೇ ನಿಜವಾದ ಕತೆ, ವರದಿ !ಈ ರೀತಿಯ ಅಸಮಾನತೆ, ನಂಬಲಸಾಧ್ಯವಾದ ಶ್ರೀಮಂತಿಕೆ ಮತ್ತು ಬಡತನಗಳನ್ನು ಅರಿಯಬೇಕು. ಸುಮ್ಮನೆ ಅಚ್ಚರಿಪಡಿಸುವ ಸುದ್ದಿ ಮಾಡಲು ಹೋದರೆ, ನಿಜವಾಗಿಯೂ ದಿಗಿಲುಬಡಿಸುವಂತಹ ಸುದ್ದಿ ಮರೆಯಾಗುತ್ತದೆ.

- ಪಿ. ಸಾಯಿನಾಥ್