
ನನ್ನ ಪ್ರೀತಿಯ ಪತ್ರಕರ್ತ, ಲೇಖಕ ಪಾಲಗುಮ್ಮಿ ಸಾಯಿನಾಥ್ ಬರೆದ ಲೇಖನದಿಂದ ಅನುವಾದಿಸಿದ ಆಯ್ದ ಭಾಗ ಇದು. ನಿಮಗೆ ಇಷ್ಟವಾಗುತ್ತದೆ ಎಂಬ ಆಶಯದೊಂದಿಗೆ.
ಬಡತನದ ಬಗ್ಗೆ ವರದಿ ಬರೆಯಲು ಕೆಲವು ಸುಲಭ ವಿಧಾನಗಳಿವೆ. ಒಂದು- ಸಂತನ ಹಾಗೆ ಬರೆಯುವುದು. ಆಕಾಶದಲ್ಲೆಲ್ಲೋ ದೃಷ್ಟಿ ನೆಟ್ಟಂತೆ ಕಾಣುವ ಒಬ್ಬಅವಧೂತ
, ದಾರ್ಶನಿಕ ಈ ಊರಿನಲ್ಲಿ ಕಾಣಬರುವ ಎಲ್ಲ ಸಮಸ್ಯೆಗಳನ್ನು ತುಂಬ ಸುಲಭವಾಗಿ ಪರಿಹರಿಸುತ್ತಾನೆ. ಇದನ್ನೇ ದೇಶದ ಎಲ್ಲಾ ಹಳ್ಳಿಗಳಿಗೂ ವಿಸ್ತರಿಸಿದರೆ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಿ ರಾಮರಾಜ್ಯವಾಗುತ್ತದೆ ಎಂದು ವರದಿ ಮಾಡುವುದು.
ಇನ್ನೊಂದು ವಿಧಾನ- ಬಡವರು ಸದಾ ಬಲಿಪಶುಗಳು, ಅಸಹಾಯಕರು, ಹತಾಶರು ಎಂದು ಬರೆಯುವುದು. ಮತ್ತೊಂದು- ಹಳ್ಳಿಗರು ಏನೊಂದೂ ಮೋಸವನ್ನೂ ಅರಿಯದ ಅಮಾಯಕರು ಎಂದು ತಿಳಿದು ವರದಿ ಮಾಡುವುದು. ಬಡತನದ ಬಗ್ಗೆ ಇದ್ದುದನ್ನು ಇದ್ದಂತೆ, ಅಂದರೆ ಸಾಪೇಕ್ಷವಾಗಿ ನೋಡುವ ಬದಲು ಅದನ್ನು ಅಸಮಾನತೆಯ ದೃಷ್ಟಿಯಿಂದ, ವರ್ಗಶೋಷಣೆಯ ದೃಷ್ಟಿಯಿಂದ ನೋಡುವುದು ಒಂದು ಸಮಸ್ಯೆ. ಒಂದು ಕಡೆ ಬಡವರು ಕಂಡರೆ "ಇಡೀ ಜಿಲ್ಲೆಯೇ ಬಡವರಿಂದ ಭಯಂಕರವಾಗಿ ತುಂಬಿಹೋಗಿದೆ’ ಎಂದು ಬರೆಯುವವರಿದ್ದಾರೆ !
ಇತ್ತೀಚೆಗೆ ನಾನು "ಬುಂದೇಲ್‌ಖಂಡ: ಭವಿಷ್ಯವಿಲ್ಲದ ನೆಲ’ ಎಂಬ ವರದಿ ಓದಿದೆ. ವರದಿಯಲ್ಲಿ ಹೇಳಿದಂತೆ, ಎಲ್ಲರೂ ಬಡತನದಲ್ಲಿದ್ದಾರೆ. ಅಲ್ಲಿನ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ತಿಕಮ್‌ಗಢ ಒಂದು. ವರದಿಯಲ್ಲಿ ಹೇಳುವಂತೆ ಇಲ್ಲಿಯ ನೆಲ ಬರಡು. ಫಲವತ್ತಾಗಿಲ್ಲದಿರುವುದರಿಂದ ಇಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ಈ ಜಿಲ್ಲೆ ಇಡೀ ರಾಜ್ಯದಲ್ಲೇ ಗೋಧಿ ಬೆಳೆ ಬೆಳೆಯುವುದರಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಬೆಳೆಯುವವರು ಯಾರು ? ಕೆಲವೇ ಜನರಲ್ಲಿ ಈ ಶ್ರೀಮಂತಿಕೆ ಇದೆ ಎಂಬುದನ್ನು, ಹಾಗೆಯೇ ಬಡವರ ಸ್ಥಿತಿಯಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಬುದನ್ನು ವರದಿಗಾರ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದ ವರದಿ ನಿರರ್ಥಕವಾಗಿದೆ.
ಇಲ್ಲಿನ ಪ್ರತಿ ಪಾಳೆಗಾರನೂ ಸ್ವಂತ ಕೋಟೆ, ಅರಮನೆ ಹೊಂದಿದ್ದಾನೆ. ಇಲ್ಲಿನ ಅಸಂಖ್ಯಾತ ಮಂದಿ ಬಡವರಿಗೂ ಭೂಮಿಯ ಫಲವತ್ತತೆಗೂ ಸಂಬಂಧವಿಲ್ಲ. ಗೋಧಿ ಬೆಳೆಯುವುದರಲ್ಲಿ ನಂಬರ್ ಒನ್ ಆಗಿದ್ದರೂ ಸರಕಾರಿ ದಾಖಲೆಗಳ ಪ್ರಕಾರ ಇಲ್ಲಿನ ಶಿಶುಮರಣ ಪ್ರಮಾಣ ಸಾವಿರಕ್ಕೆ ೧೯೫. ಹಾಗೆ ನೋಡಿದರೆ ಇದೇ ನಿಜವಾದ ಕತೆ, ವರದಿ !ಈ ರೀತಿಯ ಅಸಮಾನತೆ, ನಂಬಲಸಾಧ್ಯವಾದ ಶ್ರೀಮಂತಿಕೆ ಮತ್ತು ಬಡತನಗಳನ್ನು ಅರಿಯಬೇಕು. ಸುಮ್ಮನೆ ಅಚ್ಚರಿಪಡಿಸುವ ಸುದ್ದಿ ಮಾಡಲು ಹೋದರೆ, ನಿಜವಾಗಿಯೂ ದಿಗಿಲುಬಡಿಸುವಂತಹ ಸುದ್ದಿ ಮರೆಯಾಗುತ್ತದೆ.
- ಪಿ. ಸಾಯಿನಾಥ್
No comments:
Post a Comment