
ಮಾರ್ಕ್ ಟ್ವೇನ್‌ನನ್ನು ಯಾವತ್ತಾದರೂ ಓದಿದ್ದೀರ ? ಎಂಥ ಮಜಾ ಕೊಡ್ತಾನೆ ಅಂತ ಹೇಳುವಂತಿಲ್ಲ. ಸಕ್ಕತ್ ಫಿಟ್ಟಿಂಗ್ ಮಾಸ್ಟರ್. ಪ್ರತಿ ವಾಕ್ಯದಲ್ಲೂ ಒಂದು ಟ್ವಿಸ್ಟ್ ಇಟ್ಟಿರುತ್ತಾನೆ. ಹೆಚ್ಚಿನವು ಪಕ್ಕನೆ ಅರ್ಥವಾಗಿ ಗೊಳ್ಳನೆ ನಗೆ ತರಿಸುತ್ತವೆ. ಇನ್ನು ಕೆಲವು ಹಾಗಲ್ಲ, ಓದುತ್ತ ಓದುತ್ತ ಮುಂದೆ ಹೋದಾಗ ಹಿಂದಿನದ್ಯಾವುದೋ ಥಟ್ಟನೆ ಅರ್ಥವಾಗಿ ನಗು ಉಬ್ಬರಿಸಿಬಿಡುತ್ತದೆ. ಇವನು ಯಾರು ಏನು ಎಲ್ಲಿಯ ಸಾಹಿತಿ ಅಂತೆಲ್ಲ ಕೊರೆದು ನಿಮ್ಮ ತಲೆ ತಿನ್ನಬೇಕಾಗಿಲ್ಲ. ಅದೆಲ್ಲ ಗೂಗಲಿಸಿದರೆ ನಿಮಗೇ ಸಿಗುತ್ತೆ. ಅವನ ಒಂದಷ್ಟು ‘ಬೆಳ್ಳುಳ್ಳಿ ಪಟಾಕಿ’ಗಳನ್ನು ಇಲ್ಲಿ ಅನುವಾದಿಸಿ ಕೊಡುತ್ತೇನೆ. ಓದಿ ಮಜಾ ಉಡಾಯಿಸಿ.
***
೧. ಆರೋಗ್ಯ ಲೇಖನಗಳನ್ನು ಓದುವವರು ಹುಷಾರಾಗಿರಿ. ಒಂದು ದಿನ ಮುದ್ರಣ ದೋಷ ನಿಮ್ಮನ್ನು ಸಾಯಿಸಬಹುದು.
೨. ನಿನ್ನ ಪುಸ್ತಕ ಕೈಗೆತ್ತಿಕೊಂಡ ಬಳಿಕ ನಕ್ಕೂ ನಕ್ಕೂ ಸುಸ್ತಾಗಿಬಿಟ್ಟೆ. ಇನ್ಯಾವತ್ತಾದರೂ ಓದಬೇಕು.
೩. ಪ್ಯಾರಿಸ್‌ಗೆ ಹೋಗಿ ನಾನು ಫ್ರೆಂಚ್ ಮಾತನಾಡಿದಾಗ ಅಲ್ಲಿನ ಜನ ಪಿಳಿಪಿಳಿ ಕಣ್ಣುಬಿಟ್ಟು ನೋಡಿದರು. ಆ ಮೂರ್ಖರಿಗೆ ಅವರದೇ ಭಾಷೆಯನ್ನು ಅರ್ಥ ಮಾಡಿಸಲು ಕಡೆಗೂ ನನಗೆ ಸಾಧ್ಯವಾಗಲಿಲ್ಲ.
೪. ಬಾಯಿ ಮುಚ್ಚಿಕೊಂಡಿರುವುದು ಒಳ್ಳೆಯದು. ಇಲ್ಲವಾದರೆ ನೀವು ಮೂರ್ಖನೋ ಅಲ್ಲವೋ ಎಂಬ ಜನರ ಡೌಟ್ ಕ್ಲಿಯರ್ ಆಗಿಬಿಡುತ್ತದೆ.
೫. ಅಮೆರಿಕವನ್ನು ಕಂಡುಹಿಡಿದದ್ದು ಅದ್ಭುತ. ಕಂಡು ಹಿಡಿಯದಿದ್ದರೆ ಇನ್ನೂ ಸೊಗಸಾಗಿತ್ತು.
೬. ಪ್ರಯತ್ನಪಟ್ಟರೆ ನಾವು ದೋಷಗಳ ಬಗ್ಗೆ ಪ್ರಾಮಾಣಿಕವಾಗಿರಬಹುದು- ಇನ್ನೊಬ್ಬನ.
೭. ನಿಮಗೇನು ಮಾಡಲು ಇಷ್ಟವಿಲ್ಲವೋ ಅದನ್ನು ದಿನಕ್ಕಿಷ್ಟು ಹೊತ್ತಾದರೂ ಮಾಡಿ; ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಬೇರೆ ಉಪಾಯವಿಲ್ಲ.
೮. ಶಿಕ್ಷಣ- ಬುದ್ಧಿವಂತರಿಗೆ ತೆರೆದಿಡುತ್ತದೆ, ಮೂರ್ಖರಿಗೆ ಮುಚ್ಚಿಡುತ್ತದೆ. ಉಳಿದವರಿಗೆ ಅವರ ಜ್ಞಾನದ ಮಿತಿಯನ್ನು ತೋರಿಸುತ್ತದೆ.
೯. ಸರಿಯಾದ ಅಂಕಿ ಸಂಖ್ಯೆಗಳನ್ನು ಮೊದಲು ಸಂಪಾದಿಸಿಕೊಳ್ಳಿ. ಅವುಗಳನ್ನು ನಿಮಗೆ ಬೇಕಾದಂತೆ ಜೋಡಿಸುವ ಕೆಲಸ ಆಮೇಲೆ ಮಾಡಬಹುದು.
೧೦. ಶವಸಂಸ್ಕಾರಕ್ಕೆ ನಾನು ಯಾವತ್ತೂ ಹೋಗುವುದಿಲ್ಲ. ಆದರೆ ಅದರ ಬಗ್ಗೆ ನನಗೆ ಒಪ್ಪಿಗೆಯಿದೆ.
೧೧. ನನ್ನ ಬದುಕಿನಲ್ಲಿ ಹಲವಾರು ಭಯಂಕರ ಸಂಗತಿಗಳಿದ್ದವು. ಅವುಗಳಲ್ಲಿ ಕೆಲವು ನಿಜವಾಗಲೂ ನಡೆದದ್ದು.
೧೨. ಬಚಾವು, ನನ್ನ ಶಿಕ್ಷಣದಲ್ಲಿ ಶಾಲೆ ತಲೆ ತೂರಿಸದಂತೆ ನಾನು ನೋಡಿಕೊಂಡಿದ್ದೆ.
೧೩. ಹಸಿದು ಸಾಯುತ್ತಿರುವ ನಾಯಿಯನ್ನು ಕೊಂಡೊಯ್ದು ಉಪಚರಿಸಿ ಅನ್ನವಿಕ್ಕಿದರೆ, ಅದು ನಿಮ್ಮನ್ನೆಂದೂ ಕಚ್ಚುವುದಿಲ್ಲ. ನಾಯಿ ಹಾಗೂ ಮನುಷ್ಯನಿಗಿರುವ ಅಂತರವಿದು.
೧೪. ನೀವು ಸತ್ಯವನ್ನೇ ಹೇಳಿದರೆ, ಇನ್ನೇನನ್ನೂ ನೆನಪಿಟ್ಟುಕೊಳ್ಳುವ ಪ್ರಮೇಯವಿಲ್ಲ.
೧೫. ದುಃಖದ ಹಾದಿಯನ್ನು ಅದೇ ನೋಡಿಕೊಳ್ಳುತ್ತದೆ. ಆದರೆ ಸಂತೋಷದ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿತವಾಗಬೇಕಾದರೆ ಇನ್ನೊಬ್ಬರು ಜತೆಗೆ ಬೇಕೇ ಬೇಕು.
೧೬. ಪ್ರಾಮಾಣಿಕತೆ ಅತ್ಯುತ್ತಮ ಮೌಲ್ಯ- ಅದರಿಂದ ಲಾಭ ಬರುವ ಹಾಗಿದ್ದಾಗ.
೧೭. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಅದು ನಿಮ್ಮ ಮೇಲಿನವರು ನಿಮ್ಮ ಬಗ್ಗೆ ಚಾಡಿ ಹೇಳುವುದನ್ನು ತಪ್ಪಿಸುತ್ತದೆ. ಮತ್ತು ಇನ್ನಷ್ಟು ತಪ್ಪು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ.
೧೮. ಬ್ರಿಟಿಷನೊಬ್ಬ ಯಾಕೆ ಕೆಲಸ ಮಾಡ್ತಾನೆ ಅಂದ್ರೆ, ಅವನು ಮೊದಲೂ ಅದನ್ನೇ ಮಾಡಿರುತ್ತಾನೆ. ಅಮೆರಿಕನ್ ಯಾಕೆ ಕೆಲಸ ಮಾಡ್ತಾನೆ ಅಂದ್ರೆ ಅವನು ಯಾವತ್ತೂ ಅದನ್ನು ಮಾಡಿರೊಲ್ಲ.
೧೯. ನಮ್ಮಲ್ಲಿರೋ ನೈಸರ್ಗಿಕ ಖಳನಾಯಕ ಪ್ರವೃತ್ತಿ ಒಂದು ಬಿಟ್ಟರೆ, ಉಳಿದಂತೆ ನಾವೆಲ್ಲರೂ ಸಾಕಷ್ಟು ಪ್ರಾಮಾಣಿಕರೇ.
<!--[if gte mso 9]>
